ಕ್ಯಾಟ್ಲಿಯ

ಆರ್ಕಿಡೇಸೀ ಕುಟುಂಬದ ಲೀಲೈನೀ ಉಪಪಂಗಡಕ್ಕೆ ಸೇರಿದ ಒಂದು ಸುಪ್ರಸಿದ್ಧ ಅಲಂಕಾರ ಸಸ್ಯಜಾತಿ. ತನ್ನ ಹೂಗಳ ಗಾತ್ರಕ್ಕೂ ವರ್ಣ ವೈವಿಧ್ಯಕ್ಕೂ ಬಲುಹೆಸರಾಗಿದ್ದು ಬೇರಾವುದೇ  ಆರ್ಕಿಡ್ಡಿಗಿಂತ ಹೆಚ್ಚು ಜನಪ್ರಿಯವಾಗಿದೆ.

ಇದು ಅಮೆರಿಕದ ಉಷ್ಣವಲಯಗಳ ಮೂಲವಾಸಿ. ದಕ್ಷಿಣ ಅಮೆರಿಕದ ಉತ್ತರ ಹಾಗೂ ಪಶ್ಚಿಮ ಪ್ರದೇಶಗಳು ಮತ್ತು ಬ್ರಜಿûಲ್ ದೇಶದ ತೀರಪ್ರದೇಶಗಳು ಇದರ ಮುಖ್ಯ ನೆಲೆಗಳು. ಅಲ್ಲದೆ ಮೆಕ್ಸಿಕೋ ಮಧ್ಯ ಅಮೆರಿಕ, ಪನಾಮ ಮತ್ತು ಟ್ರಿನಿಡಾಡ್‍ಗಳಲ್ಲೂ ಇದರ ಹಲವಾರು ಪ್ರಭೇದಗಳು ಕಾಣಸಿಗುತ್ತವೆ. ಕ್ಯಾಟ್ಲಿಯ ಜಾತಿಯಲ್ಲಿ ಸುಮಾರು 65 ಪ್ರಭೇದಗಳೂ ಅಸಂಖ್ಯಾತ ಬಗೆಗÀಳೂ ಸಾವಿರಾರು ಅಡ್ಡತಳಿಗಳೂ ಇವೆ(ಬೇರೆ ಯಾವುದೇ ಆರ್ಕಿಡ್ಡಿಗಿಂತ ಕ್ಯಾಟ್ಲಿಯದಲ್ಲೇ ಹೆಚ್ಚು ಅಡ್ಡತಳಿಗಳಿವೆ ಎಂದು ಹೇಳಲಾಗಿದೆ). ಲೀಲೈನೀ ಉಪಪಂಗಡದ ಇತರ ಜಾತಿಯ ಆರ್ಕಿಡ್‍ಗಳೊಂದಿಗೆ ಅಡ್ಡಹಾಯಿಸಿ ಪಡೆದಿರುವ ಸಮ್ಮಿಶ್ರ ತಳಿಗಳೂ ಇವೆ.

ಎಲ್ಲ ಬಗೆಗಳೂ ಸುಮಾರು 1'-2' ಎತ್ತರಕ್ಕೆ ಬೆಳೆಯುವ ಮೂಲಿಕೆಸಸ್ಯಗಳು. ಸ್ವಾಭಾವಿಕವಾಗಿ ಅಪ್ಪುಸಸ್ಯಗಳಾದರೂ ಕೆಲವು ಬಗೆಗಳನ್ನು ಕುಂಡಗಳಲ್ಲಿ ಮೇಲ್ಮುಖವಾಗಿರುವಂತೆ ಬೆಳೆಸಬಹುದು. ಕೊಳವೆಯಾಕಾರದ ಇಲ್ಲವೆ ಕದಿರಿನಾಕಾರದ ಹಲವಾರು ಮಿಥ್ಯಾಲಶುನಗಳು, ನೆಲದೊಳಗೇ ಹುದುಗಿರುವ ಪ್ರಕಂದ, ಬಿಳಿಯ ಬಣ್ಣದ ಹೀರುಬೇರುಗಳು, ಒಂದು ಅಥವಾ ಎರಡು ಎಲೆಗಳು ಈ ಜಾತಿಯ ಸಸ್ಯಗಳ ಪ್ರಮುಖ ಲಕ್ಷಣಗಳು. ಹೂಗಳು ಒಂಟೊಂಟಿಯಾಗಿ ಇಲ್ಲವೆ ಹೂಗೊಂಚಲುಗಳಲ್ಲಿ ಅರಳುತ್ತವೆ. ಒಂದೊಂದು ಹೂವಿನಲ್ಲಿ ಅಗಲವಾಗಿ ಹರಡಿಕೊಂಡಿರುವ 3 ಪುಪ್ಟಪತ್ರಗಳು, 3 ದಳಗಳು ಇವೆ. ದಳಗಳು ಅಗಲ. ಅವುಗಳ ಅಂಚು ನೆರಿಗೆ ನೆರಿಗೆಯಾಗಿ ಮಡಿಚಿವೆ. ಎರಡು ದಳಗಳು ಒಂದು ಬಗೆಯಾಗಿದ್ದು ಮೂರನೆಯದು ಆರ್ಕಿಡ್ಡುಗಳಲ್ಲೆಲ್ಲ ಕಾಣಬರುವ ವಿಶೇಷ ರೀತಿಯ ತುಟಿಯಾಗಿ(ಲೇಬೆಲಮ್) ಮಾರ್ಪಟ್ಟಿದೆ. ತುಟಿಯ ಬುಡ ಕೊಳವೆಯಾಕಾರದ್ದು, ಬಣ್ಣ ಉಳಿದ ದಳಗಳಿಗಿಂತ ಭಿನ್ನ ರೀತಿಯದು.

ಕ್ಯಾಟ್ಲಿಯದ ಪ್ರಭೇದಗಳನ್ನು ಬೈಫೋಲಿಯೇಟ್ ಮತ್ತು ಯೂನಿಫೋಲಿಯೇಟ್ ಎಂಬ 2 ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಗುಂಪಿನ ಸಸ್ಯಗಳಲ್ಲಿ ಕೊಳವೆಯಾಕಾರದ ಮಿಥ್ಯಾಲಶುನಗಳು ಮತ್ತು ಹೆಚ್ಚು ಸಂಖ್ಯೆಯಲ್ಲಿ ಚಿಕ್ಕಗಾತ್ರದ ಹೂಗಳು ಇವೆ. ಒಂದೊಂದು ಮಿಥ್ಯಾಲಶುನದಲ್ಲೂ 2 ಎಲೆಗಳಿವೆ. ಒಂಟಿ ಎಲೆಗಳು, ಕದಿರು ಇಲ್ಲವೆ ಗದೆಯಾಕಾರದ ಮಿಥ್ಯಾಲಶುನಗಳು ಮತ್ತು ದೊಡ್ಡ ಗಾತ್ರದ ಹೂಗಳು ಎರಡನೆಯ ಗುಂಪಿನ ಸಸ್ಯಗಳ ಲಕ್ಷಣ. (ಹೂಗಳ ಸಂಖ್ಯೆಯೂ ಬಲು ಕಡಿಮೆ). ತೋಟಗಾರಿಕೆಯಲ್ಲಿ ಪ್ರಮುಖವಾಗಿರುವ ಪ್ರಭೇದಗಳೆಲ್ಲ ಎರಡನೆಯ ಗುಂಪಿಗೆ ಸೇರಿದವು. ಇವೆರಡು ಗುಂಪುಗಳಿಗೂ ಖಚಿತವಾಗಿ ಸೇರಿಸಲಾಗದ ಕೆಲವು ಬಗೆಗಳೂ ಉಂಟು. ಉದಾ: ಕ್ಯಾಸಿಟ್ರಿನ ಪ್ರಭೇದ.

ಕ್ಯಾಟ್ಲಿಯ ಗಿಡಗಳ ಕೃಷಿ ಬಹು ಸುಲಭ.  ಆರೈಕೆ ಹೆಚ್ಚು ಬೇಕಿಲ್ಲ.  ಸಾಕಷ್ಟು ಪೌಷ್ಟಿಕಾಂಶವಿರುವ ಯಾವ ಬಗೆಯ ಮಣ್ಣಿನಲ್ಲಾದರೂ ಇವು ಬೆಳೆಯಬಲ್ಲವು. ಮಣ್ಣಿನಲ್ಲಿ ಸರಾಗವಾಗಿ ಗಾಳಿಯಾಡುವಂತಿರಬೇಕು. ಅಲ್ಲದೆ ನೀರೂ ನಿಲ್ಲಬಾರದು. ಈ ರೀತಿಯ ಸೌಲಭ್ಯವಿರುವಂತೆ ಮಣ್ಣಿನೊಡನೆ ಆಸ್ಮಂಡ, ತೊಗಟೆ ಮುಂತಾದ ಕೆಲವು ವಸ್ತುಗಳನ್ನು ಸೇರಿಸುವುದು ವಾಡಿಕೆಯಲ್ಲಿದೆ. ಕ್ಯಾಟ್ಲಿಯಳಿಗೆ ಬೆಳಕೂ ಚೆನ್ನಾಗಿ ಬೀಳಬೇಕು. ಕ್ಯಾ.ಲೇಬಿಯೇಟ. ಕ್ಯಾ.ಗಟೇಟ ಮುಂತಾದ ಪ್ರಭೇದಗಳಿಗಂತೂ ಸೂರ್ಯಕಿರಣ ನೇರವಾಗಿ ಬೀಳಬೇಕು. ಗೊಬ್ಬರವೂ ಚೆನ್ನಾಗಿ ಬೇಕು; ಗೊಬ್ಬರವನ್ನು ಹಾಕಿದಷ್ಟೂ ಗಿಡಗಳ ಬೆಳೆವಣಿಗೆ ಹೆಚ್ಚು ಹುಲುಸು, ಕುಂಡದ ಇಲ್ಲವೆ ತೂಗುಬುಟ್ಟಿಯ ಗಾತ್ರಕ್ಕಿಂತ ಗಿಡಗಳು ಹೆಚ್ಚು ಅಗಲವಾಗಿ ಬೆಳೆದರೆ, ನೀರು ಸರಾಗವಾಗಿ ಇಳಿಯದಿದ್ದರೆ ಗಿಡಗಳನ್ನು ಬೇರೆ ಕುಂಡಗಳಿಗೆ ವರ್ಗಾಯಿಸಬೇಕು.

ಉದ್ಯಾನ ಪ್ರಾಮುಖ್ಯವಿರುವ ವಿವಿಧ ಕ್ಯಾಟ್ಲಿಯ ಪ್ರಭೇದಗಳನ್ನು ಮುಂದೆ ಹೆಸರಿಸಲಾಗಿದೆ. ಕ್ಯಾ.ಗ್ರಾನ್ಯುಲೋಸ, ಕ್ಯಾ.ಬೈಕಲರ್, ಕ್ಯಾ.ಸಿಟ್ರಿನ, ಕ್ಯಾ.ಅಕ್ಲಾಂಡಿಯೈ, ಕ್ಯಾ.ಬೌರಿಂಗಿಯಾನ, ಕ್ಯಾ.ಟ್ರಯೇನೀ, ಕ್ಯಾ.ವಾರ್ಸೆವಿಸಿಯೈ ಇತ್ಯಾದಿ. 		(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ